Friday, January 18, 2008

ನಿಯತ್ತು

ಬಸ್ಸು ಯವುದೋ ಹಂಪ್'ಗೆ ಬಿದ್ದು ಹಾರಿದಾಗ ತಟಕ್ಕನೆ ಎಚ್ಚರವಾಯಿತು. ನಿದ್ದೆಯಿಲ್ಲದೆ ಉರಿಯುತ್ತಿದ್ದ ಕಣ್ಣುಗಳನ್ನು ಅತೀ ಕಷ್ಟದಿಂದ ತೆರೆದು ಕಿಟಕಿಯಿಂದ ಹೊರಗೆ ದೃಷ್ಟಿ ಹಾಯಿಸಿದರೆ ಕಾಣಿಸಿದ್ದು ಕೊರೆಯುವ ಚಳಿಗೆ ಮೈಯೊಡ್ಡಿ ನಿಂತಿರುವ ಚಿಕ್ಕಮಗಳೂರಿನ ಬಸ್ಟಾಂಡು. ಡ್ರೈವರು ಬಸ್ಸನ್ನು ಅಲ್ಲಿದ್ದ ಅಲ್ಲಿದ್ದ ಎರಡೋ ಮೂರೋ ಬಸ್ಸುಗಳ ಮಧ್ಯೆ ನಿಲ್ಲಿಸಿ ಕೆಳಗಿಳಿದು ಮಾಯವಾದ. ಕಂಡಕ್ಟರೂ '10 ನಿಮ್ಶ ಟೈಮಿದೆ ನೋಡ್ರೀ' ಅಂತ ಯಾರಿಗೂ ಸಂಬಂಧಪಡದಂತೆ ಹೇಳಿ ತನ್ನ ತಲೆಯಿಡೀ ಮುಚ್ಚಿದ್ದ ಟೊಪ್ಪಿಯನ್ನು ಸರಿಮಾಡಿಕೊಂಡ. ಬಸ್ಸಲ್ಲಿದ್ದು ನಾನು ಮತ್ತೆ ಅರವಿಂದನನ್ನು ಸೇರಿಸಿದಂತೆ ಎಂಟೋ ಒಂಬತ್ತೊ ಜನ. ಆ ಹತ್ತು ನಿಮಿಷಗಳಲ್ಲಿ ಯಾರಿಗೂ ಆಸಕ್ತಿಯಿದ್ದಂತೆ ಕಾಣಲಿಲ್ಲ. ಅರವಿಂದನತ್ತ ನೋಡಿದರೆ ಯೋಗಾಸನದ ಯಾವುದೋ ಭಂಗಿಯಲ್ಲಿ ನಿದ್ದೆ ಮಾಡುತ್ತಿದ್ದ. ನಾನೂ ಕಣ್ಣು ಮುಚ್ಚಿ ಮತ್ತೆ ನಿದ್ದೆ ಮಾಡುವ ವ್ಯರ್ಥ ಪ್ರಯತ್ನದಲ್ಲಿ ತೊಡಗಿದೆ.

'ಟೀ ಬೇಕಾ ಸಾರ್' ಬಸ್ಸಿನ ಬಾಗಿಲಿನಲ್ಲಿ ಪ್ರತ್ಯಕ್ಶವಾಗಿದ್ದ ಆ ಹುಡುಗ.

'ಚಂದ್ರಲೋಕಕ್ಕೆ ಹೋಗಿ ಫ್ಲಾಗು ಹಾಕೋದಕ್ ಮೊದಲೂ ನೀವಲ್ಲಿ ಇರ್ತೀರಿ ಮಾರಾಯ...' ಆ ಮಧ್ಯರಾತ್ರಿಯ ಚಳಿಯಲ್ಲಿ ಮೈಮೇಲೆ ಇಷ್ಟಗಲದ ಎರಡು ತುಂಡು ಬಟ್ಟೆ ಹಾಕಿಕೊಂಡು ಬದುಕಿನ ದಾರಿ ಹುಡುಕುತ್ತಿದ್ದ ಹುಡುಗನನ್ನ್ನು ಕಂಡು ಬೇಜಾರಾದರೂ ಕಂಡಕ್ಟರನ 'ಸೆನ್ಸ್ ಆಫ್ ಹ್ಯೂಮರ್'ಗೆ ನಗದಿರದಾದೆ. 'ಟೀ' ಅಂತ ಕೇಳಿದೊಡನೆ ಅರ್ವೀ ಎಚ್ಚರಾಗಿಬಿಟ್ಟಿದ್ದ.

'ನೀನ್ ಕುಡಿತಿಯೇನೋ' ನನ್ನತ್ತ ತಿರುಗಿ ಕೇಳಿದೆ. ಬೇಡವೆಂದು ತಲೆಯಲ್ಲಾಡಿಸಿದೆ. ಮೊದಲೇ ನಿದ್ದೆಯಿಲ್ಲ. ಟೀ ಕುಡಿದರೆ ಇನ್ನು ದೇವರೇ ಗತಿ. ನಾಳೆ ಬೆಳಗ್ಗೆ ದಾವಣಗೆರೆ ತಲುಪಿ ಎಂಟು ಗಂಟೆಗೆ ಕ್ಲಾಸಲ್ಲಿ ಹೋಗಿ ಕೂರಬೇಕು. ಅರವಿಂದನಿಗೆ ಇದನ್ನೆಲ್ಲ ಹೇಳಿದರೆ ಅದೆಲ್ಲ ಸುಮ್ಮನೆ ಸೈಕಾಲಜಿ ಅನ್ನುತ್ತಾನೆ. ಅವನಿಗೆ ಟೀ ಕುಡಿಯೋದಕ್ಕೆ ಯಾವ ಹೊತ್ತಾದ್ರೂ ಆಗತ್ತೆ. ಹುಡುಗನ ಹತ್ತಿರ ಒಂದು ಕಪ್ ಟೀ ತಗೊಂಡು ಪರ್ಸಿಗೆ ಕೈಹಾಕಿದ. ಪರ್ಸಲ್ಲಿ ಚಿಲ್ಲರೆ ಇದ್ದಂತೆ ಕಾಣಲಿಲ್ಲ. ನೂರು ರೂಪಾಯಿಯ ನೋಟು ತೆಗೆದು ಹುಡುಗನತ್ತ ಚಾಚಿದ.

'ಮೂರ್ರುಪಾಯ್ ಸಾರ್' ಹುಡುಗ ತಲೆಕೆರೆದುಕೊಂಡ.

'ನಿನ್ಹತ್ರ ಚಿಲ್ರೆ ಇದೆಯೇನೋ' ಎಂದು ಅರ್ವಿ ನನ್ಹತ್ರ ಮುಖ ಮಾಡಿದ.

ನನ್ನ ಪರ್ಸಿನಲ್ಲಿದ್ದ ಚಿಲ್ಲರೆಯನ್ನೆಲ್ಲ ಕೊಟ್ಟಿಗೆಹಾರದಲ್ಲಿ ಟೀ ಅಂಗಡಿಯವನ ಮುಂದೆ ಸುರಿದಿದ್ದೆ. ಪರ್ಸ್ ತೆಗೆದು ನೋಡುವ ಗೋಜಿಗೂ ಹೋಗದೆ 'ಇಲ್ಲ' ಅಂದೆ ಚುಟುಕಾಗಿ. ಹುಡುಗನ ಮುಖ ಸಪ್ಪಗಾಯಿತು. ಆ ಹುಡುಗಗನನ್ನೊಮ್ಮೆ ದಿಟ್ಟಿಸಿ ನೋಡಿದೆ. ಹೆಚ್ಚೆಂದರೆ ಹತ್ತನ್ನೆರಡು ಇರಬಹುದು ಆತನ ವಯಸ್ಸು. ಅತ ಹಾಕಿಕೊಂಡಿದ್ದ ಅಂಗಿ-ಚಡ್ಡಿ ಯನ್ನು ನೋಡಿದರೆ ಯವುದೋ ಸ್ಕೂಲಿನ ಯೂನಿಫಾರಂ ಹಾಗಿತ್ತು. ಹಗಲು ಸ್ಕೂಲಿಗೋಗ್ತಾನೇನೋ ಅಂದ್ಕೊಂಡೆ. ಅಥವಾ ಯಾರೋ 'ದಾನ' ಮಾಡಿದ ಬಟ್ಟೆ ಇದ್ರೂ ಇರ್ಬಹುದು. ಪಾಪ ಅನ್ನಿಸಿದರೂ ಸಹಾನುಭೂತಿಯಿಂದ ಹೊಟ್ಟೆ ತುಂಬೋದಿಲ್ಲ ಅನ್ನೋದು ನನ್ನ ಸ್ವಂತ ಅನುಭವವಾದ್ದರಿಂದ ಸುಮ್ಮನಾದೆ.

'ಕೊಡಿ ಸಾ, ಹೊರಗಡೆ ಅಂಗಡಿಯಲ್ಲಿ ಕೇಳಿ ತಕ್ಕೊಂಬತ್ತೀನಿ' ಅಂದು ಅರ್ವಿ ಕೈಯಲ್ಲಿದ್ದ ನೋಟನ್ನೆಳೆದುಕೊಂಡು ಬಸ್ಸಿಳಿದು ಮಾಯವಾದ.

'ನಿಂಗೆ ಒಂದು ರಾಟ್ರಿ ಟೀ ಕುಡಿಯದೆ ಬದುಕಕ್ಕಾಗಲ್ವೇನೊ?' ಅರ್ವಿಯತ್ತ ತಿರುಗಿ ಹೆಚ್ಚೂ ಕಡಿಮೆ ಬೈದಂತೆ ಹೇಳಿದೆ. ಸುಮ್ಮನೆ ನನ್ನತ್ತ ನೋಡಿ ನಕ್ಕ. ಅವನಿಗೆ ಬೈಗುಳ ಯಾವತ್ತೂ ನಾಟೋದಿಲ್ಲ. ಬೈಗುಳ ಮಾತ್ರ ಅಲ್ಲ, ಹೊಗಳಿಕೆ ಕೂಡಾ. ಸುಮ್ಮನೆ ನಗುತ್ತಾನೆ. ಕಿಟಕಿಯಾಚೆ ನೋಡಿದರೆ ಟೀ ಹುಡುಗ ಬಸ್ಟಾಂಡ್'ನಲ್ಲಿದ್ದ ಅಂಗಡಿಯೊಂದರಲ್ಲಿ 'ಚಿಲ್ಲರೆ' ವ್ಯವಹಾರ ಮಾಡುತ್ತಿದ್ದ.

'ಆ ಹುಡುಗನ್ನ ನೋಡಿದರೆ ಪಾಪ ಅನ್ಸಲ್ವೇನೋ'

'ಇಲ್ಲ, ಮುಂದೆ ಡಾಕ್ಟ್ರೋ, ಎಂಜಿನೀರೋ ಅಗ್ತಾನೆ ಬಿಡು' ಅಂದೆ.

'ಹೌದು, ಅದಾಗಿಲ್ಲ ಅಂದರೆ, ರೌಡಿಯೋ ರಾಜಕಾರಣಿಯೋ ಅಗ್ತಾನೆ. ಅದು ಬಿಡು, ಡಾಕ್ಟ್ರೋ, ಎಂಜಿನೀರೋ ಆಗ್ತಾನೆ ಅಂತೀಯಲ್ಲ ನೀನೂ ಯಾವತ್ತಾದ್ರೂ ಟೀ ಮಾರ್ತಾ ಇದ್ಯೇನಲೇ?' ಎಂದು ನಕ್ಕ ಅರ್ವಿ.
'ಪಾಪಿ!' ಆತನ ಆ ಕ್ಷುದ್ರ ಜೋಕಿಗೆ ಹಾಗೆಂದು ಬೈದು ಸುಮ್ಮನಾದೆ. ಚಳಿ ಹಾಕಿಕೊಂಡಿದ್ದ ಜಾಕೆಟ್ಟಿನೊಳಗೂ ತೂರಿ ಬಂದು ತನ್ನ ಪ್ರಭಾವವನ್ನು ತೋರಿಸುತ್ತಿತ್ತು. ತಾನೂ ಒಂದು ಟೀ ತಗೋಬೇಕಿತ್ತು ಅನ್ನಿಸಿದರೂ ಅರ್ವಿಯ ಹತ್ತಿರ ಹಾಗಂತ ಹೇಳಲೋಗಲಿಲ್ಲ!

ಏಳನೇ ಸೆಮಿಸ್ಟರ್'ನ ಕಳೆದು 20 ದಿನಗಳ ರಜೆಯನ್ನು ಮುಗಿಸಿ ವಾಪಾಸು ದಾವಣಗೆರೆಯತ್ತ ಹೋಗುತ್ತಿದ್ದೆ ನಾನು. ಮಂಗಳೂರಲ್ಲಿ ತನ್ನ ಸಂಬಂಧಿಕರ ಮನೆಗೆ ಬಂದಿದ್ದ ಅರ್ವಿ ನನಗೆ ಜೊತೆಯಾಗಿದ್ದ. ಆತನ ತಂದೆ ದಾವಣಗೆರೆಯ ಅದಾವುದೋ ಕಾಲೇಜಿನಲ್ಲಿ ಲೆಕ್ಚರ್. ಮಗ 'ಕೆಟ್ಟುಹೋಗುತ್ತಾನೆಂದು' ತುಂಬಾ ಸಣ್ಣ ವಯಸ್ಸಿಗೇ ಆತನನ್ನು ಹಾಸ್ಟೆಲ್ಲಿಗೆ ಸೇರಿಸಿದ್ದರು. ಹಾಗಾಗೇ ಏನೋ, ಭಾವನಾತ್ಮಕತೆಗೂ, ವ್ಯಾವಹಾರಿಕತೆಗೂ ವ್ಯತ್ಯಾಸವೇ ಗೊತ್ತಿಲ್ಲದಂತೆ ವರ್ತಿಸುತ್ತಿದ್ದ. ಆದರೆ ನನಗೆ ಆತನಲ್ಲಿ ಹಿಡಿಸುತ್ತಿದ್ದುದು ಆತನಲ್ಲಿದ್ದ ನಿರಹಂಕಾರ. ಕಾಲೇಜಿಗೆ ಸೇರಿದ ಹೊಸದರಲ್ಲಿ ಕಾಲೇಜಿನ ಪಕ್ಕದ ಗಲ್ಲಿಗಳಲ್ಲಿ ಬೈಕು ಅಡ್ಡಾಡಿಸಿ ನನಗೋದು ರೂಮು ಹುಡುಕಿಕೊಟ್ಟಿದ್ದ. ಈ ನಾಲ್ಕು ವರ್ಷಗಳಲ್ಲಿ ನಾನು ಆತನಿಂದ ತುಂಬ 'ಹೆಲ್ಪ್' ಪಡೆದಿದ್ದರೂ ಆತ ನನ್ನಿಂದ ಎಕ್ಸ್'ಪೆಕ್ಟ್ ಮಾಡಿದ್ದು ತುಂಬಾ ಕಡಿಮೆ, ನಾನು ಪ್ರಾಂಪ್ಟ್ ಆಗಿ ಬರೆಯುತ್ತಿದ್ದ ಅಸೈನ್'ಮೆಂಟುಗಳ ಹೊರತಾಗಿ...
******

ಅರ್ವಿಯ ಕೈಯಲ್ಲಿದ್ದ ಟೀ ಯವಾಗಲೋ ಮುಗಿದಿತ್ತು. ಕಂಡಕ್ಟರು ಬಂದು ಡ್ರೈವರಿಗೆ ಕಾಯುತ್ತಿದ್ದ. ಆದರೆ ಈ ಟೀ ಹುಡುಗನ ಪತ್ತೆ ಇಲ್ಲ.

'ಬಹುಶಃ ನೀನೀಗ ಕುಡಿದ ಟೀಯ ಬೆಲೆ ನೂರು ರೂಪಾಯಿ' ಅರ್ವಿಯ ಮುಖ ನೋಡದೇ ಹೇಳಿದೆ.
'ನಾನಾಗ್ಲೇ ಅಂದ್ಕೊಂಡಿದ್ದೆ, ಈ ...ಮಕ್ಕಳು ಇಷ್ಟೇ ಅಂತ' ಒಂದು ಕೆಟ್ಟ ಬೈಗುಳ ಉಪಯೋಗಿಸಿ ಹೇಳಿದ. ಆತನ ಜಾಯಮಾನವೇ ಹಾಗೆ. ಆ ಪದವನ್ನು ಉಪಯೋಗಿಸದೆ ಆತ ಮಾತನಾಡಿದ್ದು ನಾನು ತುಂಬಾ ಕಡಿಮೆ. ತುಂಬಾ ಕ್ಯಾಜುವಲ್ ಆಗಿ ಅದನ್ನೊಂದು ನಾಮವಿಶೇಷಣ ಅನ್ನೋ ಹಾಗೆ ಉಪಯೋಗಿಸುತ್ತಿದ್ದ.

ಆತನಿಗಿದ್ದ ಸಿಟ್ಟು ಆ ಸರಿರಾತ್ರಿಯಲ್ಲಿ ಆ ಟೀ ಹುಡುಗ ನೂರು ರೂಪಾಯಿಯ ಟೋಪಿ ಹಾಕಿದ್ದಕ್ಕೆ ಅಲ್ಲ. ಅಷ್ಟು ಸುಲಭವಾಗಿ ತಾನು ಮೋಸ ಹೋದೆನಲ್ಲಾ ಅಂತ. ಬಸ್ಟಾಂಡಿನ ಸುತ್ತಲೂ ಆ ಹುಡುಗ ಎಲ್ಲೊ ಕಾಣಿಸಲಿಲ್ಲ. ಆತ ಹೋಗಿ ತುಂಬಾ ಹೊತ್ತಗಿದ್ದುದರಿಂದ ನನಗೂ ಆ ಹುಡುಗನ ಬಗ್ಗೆ ಸಿಟ್ಟು ಬರಲು ಪ್ರಾರಂಭವಾಗಿತ್ತು. ಆದರೂ ಅರ್ವಿಯನ್ನು ಸಮಾಧಾನ ಪಡಿಸುವಂತೆ

'ಈಗ ಸಿಟ್ಟು ಮಾಡ್ಕೊಂದು ಏನೂ ಪ್ರಯೋಜನವಿಲ್ಲ ಮಾರಾಯ. ಈ ಸಮಾಜದಲ್ಲಿ ಕೋಟಿಗಟ್ಟಲೇ ದುಡ್ಡಿಟ್ಕೊಂಡಿರೋರೂ ಏನೆಲ್ಲ ಸ್ಕ್ಯಾಮ್ ಮಾಡ್ತಿರ್ತಾರೆ. ಇನ್ನು ಆಪ್ಟ್ರಾಲ್ ಈತ ಟೀ ಮಾರೋ ಹುಡುಗ. ದಿನಕ್ಕೆ ನೂರು ರೂಪಾಯಿ ದುಡಿದ್ರೆ ಅದೇ ದೊಡ್ಡದು. ಅಂತದ್ರಲ್ಲಿ ಅನಾಯಾಸವಾಗಿ ನೂರು ರೂಪಾಯಿ ಸಿಕ್ಕಿದ್ರೆ ಬಿಡ್ತಾನ?' ಅಂದೆ. ಇಡೀ ಜಗತ್ತು ನಿದ್ರಿಸುತ್ತಿರಬೇಕಾದರೆ ಬಸ್ಟಾಂಡಿನಲ್ಲಿ ಟೀ ಮಾರುತ್ತ ಅಲೆದಾಡುವ ಹುಡುಗನಿಗೆ ಪ್ರಾಮಾಣಿಕತೆ ಯಾಕೆ ಬರಲಿಲ್ಲ. ಇನ್ನೊಬ್ಬರನ್ನು ವಂಚಿಸಿಯೇ ಬದುಕೋದಾದರೆ ಅದನು ಹಾಡಹಗಲೇ ಮಾಡಿ ರಾತ್ರಿ ಎಲ್ಲರ ಹಾಗೆ ಹೊದ್ದು ಮಲಗಬಹುದು. ಹೀಗೆ ಟೀ ಮಾರೋ ಅಗತ್ಯವೇ ಇರೋದಿಲ್ಲ. ಯಾಕೋ ನಂಬಿಕೆಯ ಪ್ರಶ್ನೆ ಬಂದಾಗ ಮನುಷ್ಯರ ನಡವಳಿಕೆಗಳು ತರ್ಕಕ್ಕೆ ಸಿಗೋದಿಲ್ಲ ಅನ್ನಿಸಿತು.

ಅರ್ವಿ ಕನ್ವಿನ್ಸ್ ಆದ ಹಾಗೆ ಕಾಣಲಿಲ್ಲ.ಅವನ ಸ್ಥಾನದಲ್ಲಿ ನಾನಿದ್ದಿದ್ದರೂ ಕನ್ವಿನ್ಸ್ ಆಗ್ತಿರ್ಲಿವೇನೋ. ಮೋಸ ಹೋದಾಗ ಏನೂ ಕಳೆದುಕೊಂದೆವು ಅನ್ನೋದಕ್ಕಿಂತಲೂ ನಾವು ಮೋಸ ಹೋದೆವಲ್ಲ ಅನ್ನೋ ಫೀಲಿಂಗೇ ಜಾಸ್ತಿ ನೋವುಂಟುಮಾಡುತ್ತಿದೆ. ಅಂತದೇ ಒಂದು ಅವಸ್ಥೆಯಲ್ಲಿದ ಅರ್ವಿ.

ಅಷ್ಟರಲ್ಲಿ ಡ್ರೈವರು ತನ್ನ ಸೀಟಿಗೆ ಬಂದಾಗಿತ್ತು. ಕಂಡಕ್ಟರು ಒಂದ್ಸಲ ಬಸ್ಸಿನಲ್ಲಿದ್ದವರನ್ನು ಎಣಿಸಿ 'ರೈಟ್' ಅಂದ. ಅರ್ವಿಯ ಕೈಯಲ್ಲಿದ್ದ ಗ್ಲಾಸಿನ್ನೂ ಹಾಗೇ ಇತ್ತು. ಬಸ್ಸು, ಬಸ್ಟಾಂಡಿನ ಗೇಟಿನ ಹತ್ತಿರ ಬರುತ್ತಿದ್ದಂತೆ ಕೈಯಲ್ಲಿದ್ದ ಗ್ಲಾಸನ್ನು ತೆರೆದಿದ್ದ ಕಿಟಕಿಯ ಮೂಲಕ ಹೊರಗೆ ಕಾಣುತ್ತಿದ್ದ ಚರಂಡಿಗೆಸೆದುಬಿಟ್ಟ. ಆತನ ಬಗ್ಗೆ ಗೊತ್ತಿದ್ದ ನನಗೆ ಆತನ ಆ ಚರ್ಯೆಯ ಆಶ್ಚರ್ಯವೇನೂ ಆಗಲಿಲ್ಲ...

ಬಸ್ಸು ಒಂದು ಹತ್ತಡಿ ಮುಂದೆ ಹೋಗಿರಬೇಕು. 'ಸಾರ್...' ಆ ಟೀ ಹುಡುಗ ಓಡಿಕೊಂಡು ಬರುತ್ತಿದ್ದ. ಡ್ರೈವರು ಬಸ್ಸನ್ನು ನಿಲ್ಲಿಸಲೋ ಬೇಡವೋ ಎಂಬಂತೆ ಮಾಡಿ ಕೊನೆಗೆ ನಿಲ್ಲಿಸಿದ. ಕಂಡಕ್ಟರು ಆ ಹುಡುಗನ ಕಡೆ ತಿರುಗಿ 'ಏನಪ್ಪ ನಿನ್ನ ಗೋಳು' ಅನ್ನುವಂತೆ ನೋಡಿದ. ಡ್ರೈವರು ಅಸಹನೆಯಿಂದ ಏನೋ ಬೈದ. ಆ ಹುಡುಗ ಮಾತ್ರ ಬಾಗಿಲಲ್ಲಿ ನಿಂತಿದ್ದ ಕಂಡಕ್ಟರನ ಕಾಲಿನ ಬದಿಯಿಂದ ತೂರಿಕೊಂದು ಅರವಿಂದನ ಹತ್ತಿರ ಬಂದು ತನ್ನ ಹರಿದಿದ್ದ ಅಂಗಿಯ ಕಿಸೆಗೆ ಕೈಹಾಕಿದ. ಎಲ್ಲೋ ಚೇಂಜ್ ಸಿಕ್ಕಿರಬೇಕು ಅಂದುಕೊಳ್ಳುತ್ತಿರಬೇಕಾದರೆ ಆತನ ಕೈಯಲ್ಲಿ ಅರ್ವಿ ಕೊಟ್ಟಿದ್ದ ನೂರು ರೂಪಾಯಿಯ ನೋಟು.

'ಬಸ್ಟಾಂಡಿನ ಹೊರ್ಗೆ ಅಂಗಡಿಯಲ್ಲಿ ಕೇಳಿದ್ರೂ ಚಿಲ್ರೆ ಸಿಗ್ಲಿಲ್ಲ ಸಾ. ದುಡ್ದು ಬೇಡ ಸಾ. ನನ್ ಗ್ಲಾಸೆಲ್ಲಿ ಸಾ...' ಅಂದ.

ನನ್ನ ನಿದ್ದೆಯೆಲ್ಲ ಹಾರಿಹೊಯಿತು. ನಿದ್ರಿಸುತ್ತಿದ್ದ ಕೆಲವರು ಬಸ್ಸು ನಿಂತದ್ದನ್ನು ಕಂಡು ಕಣ್ಣುಬಿಟ್ಟು ಅಂತ ವಿಶೇಷಗಳೇನೂ ಕಾಣದಿದ್ದುದರಿಂದ ಮತ್ತೆ ನಿದ್ದೆಗೆ ಶರಣಾದರು. ಕಂಡಕ್ಟರು ಮತ್ತು ಡ್ರೈವರಿಗೆ ಅದೇ ಧಾವಂತ.

ಅರ್ವಿಯ ಬಾಯಿಯಿಂದ ಮಾತೇ ಹೊರಡಲಿಲ್ಲ. ಟೀಯ ದುಡ್ಡು ಬೇಡ, ಗ್ಲಾಸು ವಾಪಾಸು ಕೊಡಿ ಅನ್ನುತ್ತಿರುವ ಹುಡುಗನಿಗೆ ನಿನ್ನ ಗ್ಲಾಸನ್ನು ಹೊರಗಡೆ ಚರಂಡಿಗೆ ಎಸೆದಿದ್ದೇನೆ ಅಂತಾನಾ? ಪದಗಳಿಗಾಗಿ ತಡಕಾಡುತ್ತಿದ್ದ ಅರ್ವಿಯ ಕಿವಿಯಲ್ಲಿ 'ಆ ನೂರು ರೂಪಾಯಿನ ಅವ್ನಿಗೆ ಕೊಟ್ಟು ಕಳ್ಸು' ಅಂದೆ, ಬೇರೆ ಯಾವ ದಾರಿಯೂ ಇರಲಿಲ್ಲ.

'ಈ ನೂರು ರೂಪಾಯಿ ಇಟ್ಕೋ, ಚೇಂಜ್ ಬೇಡ, ಹೊಸಾ ಗ್ಲಾಸು ತಕ್ಕೋ..ಹೋಗು' ಅಂದ. ಆ ಹುಡುಗನಿಗೇನೂ ಅರ್ಥವಾಗಲಿಲ್ಲ.

'ಇಳೀತೀಯೇನೋ' ಕಂಡಕ್ಟರು ಈ ಸಲ ಕಿರುಚಿದಂತೆ ಹೇಳಿದ.

ಹುಡುಗನಿಗೆ ತನ್ನ ಗ್ಲಾಸು ಸಿಗೋದಿಲ್ಲ ಅಂತ ಅರ್ಥವಾಯಿತೇನೋ...ಅಳುಮುಖ ಮಾಡಿಕೊಂಡವನೇ ಸರಕ್ಕನೆ ತಿರುಗಿ ಬಂದ ವೇಗದಲ್ಲೇ ಬಸ್ಸಿನಿಂದಿಳಿದು ಹೋದ. ಡ್ರೈವರು ಇನ್ನೊಂದು ಸಲ ಏನನ್ನೋ ಬೈದು ಗಾಡಿ ಸ್ಟಾರ್ಟ್ ಮಾಡಿದ. ಬಸ್ಸಿನ ಕಿಟಕಿಯಿಂದ ಹೊರಗೆ ನೋಡಿದರೆ ನಿಯಾನ್ ದೀಪದ ಬೆಳಕಿನಲ್ಲಿ ನಡೆದು ಹೋಗಿತ್ತಿದ್ದ ಆ ಹುಡುಗ...ನಮಗೆ ನಾವೇ ಸಣ್ಣವರಾಗಿ ಬಿಟ್ಟೆವು ಅನಿಸಿತು.
ತಿರುಗಿ ಅರ್ವಿಯತ್ತ ನೋಡಿದೆ. ಆತನ ಕೈಯಲ್ಲಿ ನೂರು ರೂಪಾಯಿಯ ನೋಟು ಹಾಗೆ ಇತ್ತು. ನನ್ನ ಪ್ರಾಮಾಣಿಕತೆಯ ಬಗೆಗಿನ ತರ್ಕಕ್ಕೆ ಈಗ ಉತ್ತರ ಸಿಕ್ಕಿತ್ತು. ಆ ರಾತ್ರಿ ಎಷ್ಟೇ ನಿದ್ದೆಗೆ ಪ್ರಯತ್ನಿಸಿದರೂ ಆ ಟೀ ಹುಡುಗ 'ಟೀ ಬೇಕ ಸಾ' ಅನ್ನುತ್ತಿದ್ದ ಆ ಹುಡುಗನ ಮುಖವೇ ಕಣ್ಣಮುಂದೆ ಬರುತ್ತಿತ್ತು.
********