Saturday, July 14, 2007

ಬ್ರಹ್ಮಚಾರಿಗಳೂ, ನಳಪಾಕವೂ...

ನೀವು ಬ್ರಹ್ಮಚಾರಿಗಳಾಗಿದ್ದು (ಅನಿವಾರ್ಯ ಬ್ರಹ್ಮಚಾರಿಗಳಾಗಿದ್ರೂ ಸರಿ) ಒಂಟಿಯಾಗೋ ಅಥವಾ ನಿಮ್ಮ ಮಿತ್ರರ ಜೊತೆಗೋ ಇರೋರಾಗಿದ್ರೆ ನಿಮ್ಗೊಂದು ಸಾಮಾನ್ಯ ಪ್ರಶ್ನೆ - 'ಊಟಕ್ಕೇನ್ಮಾಡ್ತೀರಿ?'. ಹುಡುಗೀರಾದ್ರೆ ಪರವಾಗಿಲ್ಲ. ಕೆಲವರಿಗೆ ಅಡುಗೆ ಮಾಡೋ ಕೌಶಲ್ಯ ವಂಶವಾಹಿನಿಯಲ್ಲೇ ಬಂದಿರತ್ತೆ. ಅದು ಮಿಸ್ಸಾಗಿದ್ರೂ ನಿಮ್ಗೋಸ್ಕರ ಬಾಡಿಗೆ ಆಂಟಿಯರು (ಬಾಡಿಗೆ ಅತ್ತೆಯರು ಅನ್ನೋದು ಸ್ವಲ್ಪ ಕಷ್ಟ, ಎಷ್ಟಾದ್ರೊ ಅತ್ತೆ, ಅತ್ತೆಯೇ) ಪ್ರಪಂಚದ ಎಲ್ಲ ಮೂಲೆಯಲ್ಲೂ ಇರುತ್ತಾರೆ. ಆದ್ರೆ ಅತ್ತ ಹೋಟೆಲ್ ಊಟವೂ ಸೇರದ, ಇತ್ತ ನೆಟ್ಟಗೆ ಅಡುಗೆಯೂ ಬರದ ನನ್ನಂಥಾ ಬ್ರಹ್ಮಚಾರಿಗಳಿಗೆ ಊಟ ಅನ್ನೋದೊಂದು 'ಅನಿವಾರ್ಯ ಕರ್ಮ' ಅಂತ ಒಂದೊಂದು ಸಲ ಅನ್ನಿಸಿಬಿಡುತ್ತದೆ.

ಪೇಟೆಯಲ್ಲಿರೋರಿಗೆ ಹೋಟೆಲ್ ಗಳಿಗೇನೂ ಬರವಿಲ್ಲ. ವೆಜ್ಜು ನಾನ್ವೆಜ್ಜು ಅಂತಾ ವೆರೈಟಿಯ ಹೋಟೆಲ್ಲುಗಳಿರುತ್ತವೆ. ಎಲ್ಲ ಸರಿ. ಆದರೆ ದಿನಾ ಹೋಟೆಲ್ ಊಟ ಅಂದರೆ - ಅದು ಪಂಚತಾರ ಹೋಟೆಲ್ ಆದರೂ- ಅದೇನೋ ಬೇಜಾರು. ಅಷ್ಟಕ್ಕೂ ಊಟ ರುಚಿ ಇದೆ ಅನ್ಸೋದು ಅದು ಮನೆ ಊಟವನ್ನು ನೆನಪಿಸಿದ್ರೇ ಹೊರತು ಊಟದಲ್ಲಿರೋ ಐಟಂಗಳ ಸಂಖ್ಯೆಯಿಂದಾಗಿ ಖಂಡಿತಾ ಅಲ್ಲ. ಹೋಟೆಲ್ ಊಟದ ರುಚಿ ಇವತ್ತಿನಿಂದ ನಾಳೆಗೆ ಬದಲಾಗೋದಿಲ್ಲ. ನಾಲಕ್ಕು ದಿನ ಊಟ ಮಾಡಿದ್ರೆ ಐದನೆಯ ದಿನ ಬೇರೆಲ್ಲದರೂ ಟ್ರೈ ಮಾಡೋಣ ಅನಿಸಿಬಿಡುತ್ತದೆ.

ಸರಿ, ಈ ಹೋಟೆಲ್ ಊಟದ ರಗಳೆಯೇ ಬೇಡ. ಹುಡುಗೀರ ಥರಾ ಪೇಯಿಂಗ್ ಗೆಸ್ಟ್ ಗಳಾಗೋಣ ಅಂದ್ರೆ ನಿಮ್ಮನ್ನು ಬಾಡಿಗೆ ಅಳಿಯನನ್ನಾಗಿ ಸ್ವೀಕರಿಸೋ ಅತ್ತೆ ಸಿಗಬೇಕಂದ್ರೆ ನೀವು ಏಳು ಜನ್ಮದ ಪುಣ್ಯ ಮಾಡಿರ್ಬೇಕು. ಓಕೆ, ಯಾರದ್ರೂ ಸಿಕ್ಕಿದ್ರು ಅಂತಿಟ್ಕೊಳ್ಳೋಣ. ನೀವು ರಾತ್ರಿ ಎಂಟು ಗಂಟೆಗೆ ಮೊದಲು ಮನೇಲಿರ್ಬೇಕು. ಹೊತ್ತಲ್ಲದ ಹೊತ್ತಿನಲ್ಲಿ ಊಟಕ್ಕೆ ಬರೋ ಹಾಗಿಲ್ಲ. ನಿಮ್ಮ ಫ್ರೆಂಡ್ಸ್ ಅನ್ನು ಮನೆಗೆ invite ಮಾಡೋ ಹಾಗಿಲ್ಲ. ಸಂಜೆ ಏಳು ಗಂಟೆಗೆ ಫೋನ್ ಮಾಡಿ 'ನನ್ನ friends ಜೊತೆ ಪಾರ್ಟಿಗೆ ಹೋಗ್ತಾ ಇದೀನಿ, ರಾತ್ರಿ ಊಟಕ್ಕೆ ಬರೋಲ್ಲ' ಅಂತ ಕೊನೆಕ್ಷಣದ plan ಗಳನ್ನು ಹಾಕೋ ಹಾಗಿಲ್ಲ. ಇನ್ನೂ ಎಷ್ಟೋ ಇಲ್ಲಗಳ ಮಧ್ಯೆ ಬದುಕೋದು ನಮ್ಮ ನಿಮ್ಮಿಂದ ಬದುಕೋದು ಸಾಧ್ಯವೇ ಇಲ್ಲ.

ಕೊನೆಗೆ ಉಳಿಯೋದು ಒಂದೇ ದಾರಿ. ಮಾಡಿದ್ದುಣ್ಣೋ ಮಾರಾಯ. ಗ್ಯಾಸು, ಸ್ಟವ್ವ್, ಮಿಕ್ಸಿ, ಕುಕ್ಕರ್ರು ಒಂದೊಂದಾಗಿ ಮನೆಗೆ ಬರತ್ವೆ. ದುಡ್ಡು ಕೊಟ್ರೆ ಈ ದುನಿಯಾದಲ್ಲಿ ಸಿಗದ್ದು ಏನಿದೆ. ಎಲ್ಲಾ ಸಿಗತ್ತೆ. ಆದರೆ ಅಡುಗೆ ಮಾಡೋರು ಯಾರು? ವೆಲ್, ಅಡುಗೆ ಮಾಡೊದೇನೋ ಬ್ರಹ್ಮವಿದ್ಯೆಯಲ್ಲ ಅಂತ ಮಾಡೋದಕ್ಕೆ ಹೊರಟರೆ ನಾವೇ ಮಾಡಿದ್ದಲ್ವ ಅನ್ನೊ ಕಾರಣಕ್ಕೆ ತಿನ್ನೋವಲ್ಲಿಗೆ ಬಂದು ಮುಕ್ತಾಯವಾಗುತ್ತದೆ.

ಅನುಭವಕ್ಕಿಂತ ದೊಡ್ಡ ಪಾಠ ಇನ್ನೊಂದಿಲ್ಲ ಅಂತಾರೆ. ಹಾಗೋ ಹೀಗೋ ನಾಲ್ಕು ದಿನ ಏನೋ ಬೇಯಿಸಿದರೆ ಐದನೆಯ ದಿನಕ್ಕೆ ಏನೋ ಒಂದು ತಿನ್ನುವಂತದ್ದು ತಯಾರಾಗಿಬಿಡುತ್ತದೆ. ಬದುಕೋದಕ್ಕೆ ನಾವೇ ಒಂದಿಷ್ಟು ಬೇಯಿಸಿಕೊಳ್ಳೊದು ಅಷ್ಟು ಕಷ್ಟದ ವಿಷಯವಲ್ಲ ಅನ್ನಿಸುತ್ತದೆ. ಮೊದಮೊದಲಿಗೆ ಸ್ಟವ್ವಲ್ಲೇನೋ ಇಟ್ಬಿಟ್ಟು ಟಿವಿ ನೋಡೋದಕ್ಕೆ ಬಂದು ಕುಳಿತರೆ ಪಾತ್ರೆ ಸುಟ್ಟು ಹೋಗೋತನಕ ಗೊತ್ತಾಗೋಲ್ಲ. ಕುದಿಸೋಕಿಟ್ಟ ಹಾಲು ಉಕ್ಕಿ ಹರಿದು ಚುಯ್ ಅಂತ ಸದ್ದು ಬಂದಾಗ ಕೂತಲ್ಲಿಂದ ಚಂಗನೆ ಎದ್ದು ಎಲ್ಲರೂ ಒಂದಲ್ಲ ದಿನ ಓಡೇ ಇರುತ್ತೀರಿ (ಹೀಗೇ ಒಂದು ಮೂರ್ನಾಲ್ಕು ಪಾತ್ರೆಗಳಿಗೆ ಮೋಕ್ಷ ತೋರಿಸಿದೆ ಕೀರ್ತಿ ನನ್ನ ಹೆಸರಿನಲ್ಲೂ ಇದೆ). ನಿಮ್ಮ ರೂಂಮೇಟು ಉಪ್ಪು ಹಾಕಿ ಕುದಿಸೋಕಿಟ್ಟ ಸಾಂಬಾರಿಗೆ ನೀವು ಇನ್ನೆರಡು ಚಮಚ ಉಪ್ಪು ಹಾಕಿ ಕೊನೆಗೆ ಅದನ್ನು ಮನೆ ಹಿಂದಿನ ತೆಂಗಿನಮರದ ಬುಡಕ್ಕೆ ಸುರಿದಿರ್ತೀರಿ. ಟೀಗೆ ಇಬ್ಬಿಬ್ರು ಸಕ್ರೆ ಹಾಕಿ ಪಾಯಸ ಅಂದ್ಕೊಂಡು ಕುಡಿದಿರ್ತೀರಿ. ಅಡುಗೆ ಮಾಡೊದಿಕ್ಕೆ ಬರೋ (ಅಥವಾ ಹಾಗಂತ ಹೇಳ್ಕೊಳ್ಳೋ!) ಗೆಳತಿಯರಿಂದನೋ ಅಥವಾ ಊರಲ್ಲಿರೋ ಅಮ್ಮನ ಹತ್ರಾನೋ online help ತಗೊಂಡು ಹೊಸರುಚಿ ಅನ್ನುವಂತದ್ದೇನನ್ನೋ ಪ್ರಯತ್ನಿಸಿರ್ತೀರಿ.....

ಇರಲಿ, ಅದರ ಅನುಭವಗಳನ್ನು ಹೇಳಿ ಮುಗಿಯೋವಂತದ್ದಲ್ಲ. ಅಡುಗೆ ಅನ್ನೋದು ಕೇವಲ ಬೇಯಿಸೋದಲ್ಲ. ನನ ಪ್ರಕಾರ ಒಳ್ಳೆಯ ಟೇಸ್ಟಿನ ಅಡುಗೆ ಮಾಡೋದು ಅಷ್ಟು ದೊಡ್ಡ ಸಂಗತಿಯಲ್ಲ. ನಿಮ್ಮ ಅಡುಗೆಮನೇನ ಹೇಗೆ ಇಟ್ಕೊಳ್ಟೀರಾನ್ನೋದು ಕೂಡ ಅಷ್ಟೇ ಇಂಪಾರ್ಟೆನ್ಟು. ಯಾಕಂದ್ರೆ ಅಡುಗೆ ಮಾಡಿದ ಮೇಲಿನ ಕ್ಲೀನಿಂಗ್ ಕೆಲಸ ಎಲ್ರಿಗೂ ಆಗಿಬರುವಂತದಲ್ಲ. ಈ ಮಾತು ಖಂಡಿತವಾಗಿ ಎಲ್ರಿಗೂ ಅನ್ವಯವಾಗತ್ತೆ. ಅದರ ಬಗ್ಗೆ ಇನ್ನೊಂದು ಸಲಾ ಬರೀತೀನಿ. ಈಗ ನಿಮ್ಮ ಅಡುಗೆಮನೆ ಒಂದ್ಸಲ ಕಣ್ಮುಂದೆ ಬಂದಿರತ್ತೆ ಅಂದ್ಕೊಳ್ತೀನಿ......

0 Comments:

Post a Comment

<< Home